Ad Code

ಬೇರು-ಬದುಕಿನ ನಾಟಿ ವೈದ್ಯ ಮಂಜಣ್ಣ

ವೈದ್ಯಕೀಯ ವೃತ್ತಿ ವ್ಯಾಪಾರವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಜನರಿಗೆ ಬೇರು, ನಾರು, ಔಷಧೀಯ ಸಸ್ಯಗಳ ಬಗ್ಗೆ ವಿವರಿಸಿ, ಔಷಧ ನೀಡುವ ಮಹಾನುಭಾವರು ಇಂದಿಗೂ ನಮ್ಮೊಂದಿಗಿದ್ದಾರೆ ಎಂದರೆ ನಂಬಲು ಸಾಧ್ಯವಾಗದು. ನಿಜ ಇದನ್ನು ನೀವು ನಂಬಲೇಬೇಕು. ಉತ್ತರಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹೂಡ್ಲಮನೆಯ ಮಂಜುನಾಥ ಹೆಗಡೆ ಇಂಥ ಅಪರೂಪದ ನಾಟಿವೈದ್ಯರಲ್ಲಿ ಒಬ್ಬರು. ದುಬಾರಿ ವೆಚ್ಛ, ಅಡ್ಡ ಪರಿಣಾಮಗಳ ಪಾಶ್ಚಿಮಾತ್ಯ ವೈದ್ಯ ಪದ್ಧತಿಯಿಂದ ಜನರು ರೋಸಿಹೋಗಿದ್ದು ಒಂದೆಡೆಯಾದರೆ, ಈಗ ಪ್ರಕೃತಿ ಚಿಕಿತ್ಸಾ ಕೇಂದ್ರಗಳು, ಸ್ಟಾರ್ ರೆಸಿಡೆನ್ಸಿಗಳ ಹೆಸರಿನಲ್ಲಿ ನಡೆಯುವ ‘ಆಯುರ್ವೇದ’ ದ ಚಿಕಿತ್ಸೆಗಳು ಸಾಮಾನ್ಯ ಜನರಿಗೆ ನಿಲುಕಲಾರzವಾಗಿವೆ. ಇಂತಹ ಸಂದರ್ಭದಲ್ಲಿ ಬೇರಿಗೊಂದು ಬದುಕು ನೀಡಿ, ಬದುಕಿಗೊಂದು ಬೇರು ನೀಡುವ ಅಪರೂಪದ ನಾಟಿವೈದ್ಯನ ಶ್ರಮದ ಪರಿಚಯ ಪ್ರಸ್ತುತವೆನಿಸಬಹುದು.

ಪಾರಂಪರಿಕ ವೈದ್ಯ ಮಂಜಣ್ಣ

ಮಂಜಣ್ಣ ಎಂದೇ ಪರಿಚಿತರಾಗಿರುವ ಇವರಿಗೆ ಔಷಧನೀಡುವ ಪದ್ಧತಿ ಪರಂಪರಾಗತವಾಗಿ ಬಂದಿದೆ. ಚರ್ಮರೋಗ, ಮೂಲವ್ಯಾಧಿ, ಆಮಶಂಖೆ, ಹುಲ್ಲು ಸಾರಂಗ ಕಚ್ಚಿದ ಬಗ್ಗೆ ಔಷಧ ನೀಡುವ ಇವರದು ಸರಳ ವ್ಯಕ್ತಿತ್ವ. ಸಾಮಾನ್ಯವಾಗಿ ಔಷಧ ನೀಡುವವರು ಔಷಧದ ವಿವರ ನೀಡುವುದು ವಿರಳ ಆದರೆ ಮಂಜಣ್ಣ ಇದಕ್ಕೆ ಅಪವಾದ ಔಷಧೀಯ ಸಸ್ಯದ ಪರಿಚಯ ಮಾಡಿಸಿಕೊಡುವುದೇ ಇವರ ಮೂಲ ಉದ್ದೇಶ. ಇದಕ್ಕಾಗಿ ಶೃಂಗೇರಿ, ಕೊಪ್ಪ ಸೇರಿದಂತೆ ಶಿರಸಿ ಸುತ್ತ ಮುತ್ತಲೂ ಸುಮಾರು ಮೂವತ್ತಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ. ಮನೆಯ ಹಿತ್ತಲಿನಲ್ಲಿ ಬೆಳೆಯುವ ಪ್ರತಿಯೊಂದು ಸಸ್ಯದಲ್ಲಿಯೂ ಔಷಧೀಯ ಗುಣವಿದೆ ಎನ್ನುತ್ತಾರೆ. 

ಮನೆಯ ಹಿತ್ತಲೇ ಔಷಧಿವನ

 ಮಂಜಣ್ಣನವರ ಮನೆಯ ಹಿತ್ತಲಿನಲ್ಲಿ ಕಾಣಸಿಗುವುದೆಲ್ಲ ಅಪರೂಪದ ಔಷಧಿಯಸಸ್ಯಗಳು. ಏಕನಾಯಕ, ನೆಲ್ಲಿ, ನೆಲನೆಲ್ಲಿ, ಶಿವನೆ, ಗಿರಾತಕಡ್ಡಿ, ವಾತಂಗಿ, ನೇರಳೆ ಹೀಗೆ ಔಷಧೀಯ ಸಸ್ಯಗಳನ್ನು ಹಿತ್ತಲಿನಲ್ಲಿ ಅಷ್ಟೇ ಅಲ್ಲ ತಮಗಿರುವ ಒಂಭತ್ತು ಎಕರೆ ಬೆಟ್ಟದಲ್ಲಿಯೂ ಬೆಳೆಸಿದ್ದಾರೆ. ಪ್ರತಿ ಭಾನುವಾರ ಹಾಗೂ ಗುರುವಾರದಂದು ಔಷಧಿ ನೀಡುವ ಇವರು ರೋಗಿ ಗುಣಮುಖ ಹೊಂದಿ ಅವನಲ್ಲಿ ಕಾಣುವ ಮಂದಹಾಸದಿoದ ಸಂತೃಪ್ತಿ ಕಂಡುಕೊಳ್ಳುತ್ತಾರೆ.

ಬೇರಿಗೂ ಬದುಕು ಕೊಟ್ಟರು

ಸಮಾನ ಮನಸ್ಕರೊಂದಿಗೆ ‘ಆಕಾರ ಬಳಗ’ ವೆಂಬ ಕಲಾಬಳಗವನ್ನು ರಚಿಸಿಕೊಂಡಿರುವ ಮಂಜಣ್ಣ ಹೊಳೆ ಹಳ್ಳಗಳ ಅಂಚಿನಲ್ಲಿ ಕಿತ್ತು ಬೀಳುವ ಬೇರು ನಾರುಗಳಿಗೆ, ಅಡಿಕೆ ಮರದ ದಬ್ಬೆಗಳಿಗೆ ಜೀವಂತಿಕೆಯ ಸ್ಪರ್ಷ ನೀಡುತ್ತಿದ್ದಾರೆ. 2010 ರಲ್ಲಿ ಇವರು ನಡೆಸಿದ ‘ಬೇರು ಬದುಕು’ ಕಲಾಪ್ರದರ್ಶನ ಸಾವಿರಾರು ಜನರನ್ನು ಆಕರ್ಷಿಸಿತ್ತು. ಇವರ ಮನೆಯಲ್ಲಿರುವ ಅಡಿಕೆ ದಬ್ಬೆಯ ಖುರ್ಚಿ, ವೀಳ್ಯದೆಲೆಯ ಫ್ರಿಜ್ , ಕೊಕ್ಕರೆ, ಹಾವು, ಅಡಿಕೆ ಹಾಳೆಯಿಂದ ತಯಾರಿಸಿದ ಹೂ, ಪುಟ್ಟ ಪುಟ್ಟ ಮಾದರಿಗಳು ಕಣ್ಮನ ಸೆಳೆಯುತ್ತವೆ.

ಅರಸಿ ಬಂದ ಪ್ರಶಸ್ತಿಗಳು

ಕರಕುಶಲತೆಗೆ ಸಂಬoಧಿಸಿದoತೆ 2011 ರಲ್ಲಿ ಸತ್ತೂರು ಮಠ ನೀಡುವ ಶ್ರೀ ಆದಿಶಂಕರಾಚಾರ್ಯ ಪ್ರಶಸ್ತಿಗೆ, ಬೆಂಗಳೂರಿನ ಸಂರಕ್ಷಣಾ ಸೇವಾ ಸಂಸ್ಥೆ ನೀಡುವ ‘ಆರ್ಯಭಟ’ ಪ್ರಶಸ್ತಿಗೆ ಮಂಜಣ್ಣ ಭಾಜನರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿರುವ, ಆಯುರ್ವೇದದ ಗಿಡಮೂಲಿಕೆಗಳ ಔಷಧ ಕುರಿತ ‘ಗೃಹ ಸಂಜೀವಿನಿ’ (ಮನೆ ಮದ್ದು) ಪುಸ್ತಕವನ್ನು ಹೊರತಂದಿದ್ದಾರೆ.

ಸಾಧನೆಯ ಹಿಂದಿನ ಶಕ್ತಿ

ಪ್ರತಿಯೊಬ್ಬ ಯಶಸ್ವೀ ಪರುಷನ ಹಿಂದೆ ಸ್ತ್ರೀ ಇದ್ದಾಳೆ. ತನ್ನ ಯಶಸ್ಸಿನ ಹಿಂದಿರುವ ಶಕ್ತಿ ಪತ್ನಿ ಯಶೋದಾ ಎನ್ನುತ್ತಾರೆ ಮಂಜಣ್ಣ. ಆಕಾರ ಬಳಗದ ಸದಸ್ಯರನ್ನು, ಊರವರನ್ನು ಸ್ಮರಿಸಿಕೊಳ್ಳುವ ನಾಟಿವೈದ್ಯ ಮಂಜಣ್ಣ ವೈದ್ಯಲೋಕಕ್ಕೆ ಮಾದರಿ.

ಅಕ್ಟೋಬರ್ 16 ರವಿವಾರ ನಡೆಯುತ್ತಿರುವ ಚುಟುಕು ಸಾಹಿತ್ಯ ಪರಿಷತ್ತಿನ ಚುಟುಕು ಕವಿಗೋಷ್ಠಿ ಹಾಗೂ ಜಿಲ್ಲಾ ಮಟ್ಟದ ವಿಚಾರಗೋಷ್ಠಿಯ ಸರ್ವಾಧ್ಯಕ್ಷತೆಯನ್ನು ಮಂಜಣ್ಣ ವಹಿಸುತ್ತಿರುವುದು ಸಂತಸ ದ ವಿಷಯ ಈ ಸಂದರ್ಭದಲ್ಲಿ ಹಂಸ ದಿಂದ ಲೇಖನ.


Post a Comment

0 Comments